ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಸರ್ವ ವರ್ಣಿಕ ಕಲೆ ಯಕ್ಷಗಾನ

ಲೇಖಕರು :
ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್
ಗುರುವಾರ, ಜುಲೈ 4 , 2013

ಕಲಾವಿದ ಸಂಜೀವ ಸುವರ್ಣರು ಯಕ್ಷಗಾನದ ನಾಂದಿ ಪೂಜೆಗೆ ಚೆಂಡೆ ಬಡಿಯುವ ಸಲುವಾಗಿ ದೇವಸ್ಥಾನದ ಒಳಹೋಗಲು ಹಿಂಜರಿದ ಬಗೆಯನ್ನು ಉಲ್ಲೇಖಿಸಿದ್ದಾರೆ. ಅವರು ಹಿಂದುಳಿದ ಬಿಲ್ಲವ ಸಮಾಜಕ್ಕೆ ಸೇರಿದವರಾದುದರಿಂದ ದೇವಸ್ಥಾನ ಪ್ರವೇಶಕ್ಕೆ ನಿಷೇಧವಿದ್ದಿರಬೇಕು. ಬಿಲ್ಲವರಿಗೆ ಕೇವಲ ದೇವಸ್ಥಾನ ಪ್ರವೇಶ ನಿಷೇಧವಷ್ಟೇ ಅಲ್ಲದೆ ದೇವಸ್ಥಾನದ ವತಿಯಿಂದ ನಡೆಸಲಾಗುವ ಕೆಲವು ಮೇಳಗಳಲ್ಲಿ ವೇಷ ಹಾಕುವ ಅವಕಾಶವೂ ಇಲ್ಲ. ಒಂದೆರಡು ವರ್ಷಗಳ ಹಿಂದೆ ಪ್ರಸಿದ್ಧ ಮಂದಾರ್ತಿ ಮೇಳದಲ್ಲಿ ಭಾಗವಹಿಸಲು ಖ್ಯಾತ ಕಲಾವಿದ ಐರೋಡಿ ಗೋವಿಂದಪ್ಪ ಅವರಿಗೆ ಅವಕಾಶ ಕೊಡದೇ ಇದ್ದದ್ದು ಮತ್ತು ಅದೊಂದು ದೊಡ್ಡ ವಿವಾದವಾಗಿ ಬೆಳೆದದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ನಾಟಕ ಮಂಡಲಿಗಳಂತೆ ಬಹಳ ಹಿಂದಿನ ಕಾಲದಿಂದಲೂ ಕರಾವಳಿ ಕರ್ನಾಟಕದಲ್ಲಿ ಯಕ್ಷಗಾನ ಮಂಡಲಿಗಳು ಹುಟ್ಟಿ ನಾಡಿನಾದ್ಯಂತ ಯಕ್ಷಗಾನ ಪ್ರದರ್ಶನಗಳನ್ನು ನಡೆಸಿ ಜನರಿಗೆ ಮನರಂಜನೆಯ ಜೊತೆಗೆ ಆಧ್ಯಾತ್ಮಿಕ, ಪೌರಾಣಿಕ ವಿಚಾರಗಳನ್ನು ಕಥನ ರೂಪದಲ್ಲಿ ಮನದಟ್ಟು ಮಾಡಿಕೊಟ್ಟಿವೆ. ಜನರಿಗೆ ಕಲೆ ಮತ್ತು ಸಾಹಿತ್ಯದ ಬಗೆಗಿನ ಆಸಕ್ತಿ ಹೆಚ್ಚಿಸಿವೆ. ಇಂಥ ಯಕ್ಷಗಾನ ಮಂಡಲಿಗಳನ್ನು ಮೇಳಗಳೆಂದು ಕರೆಯುವುದು ರೂಢಿ. ಇಂಥ ಮೇಳಗಳನ್ನು ಕಟ್ಟುವ ಕೆಲಸ ಯಕ್ಷಗಾನ ಪ್ರಿಯರಿಗಷ್ಟೇ ಸೀಮಿತವಲ್ಲ. ಕೆಲವು ದೇವಸ್ಥಾನಗಳೂ ಯಕ್ಷಗಾನ ಮೇಳಗಳನ್ನು ಕಟ್ಟಿಕೊಂಡಿವೆ.
ಶ್ರೀ ಸಂಜೀವ ಸುವರ್ಣ


ಯಕ್ಷಗಾನ ಅಭಿಜಾತ ಕಲೆಯಲ್ಲ. ಇದಕ್ಕಿರುವುದು ನೂರಾರು ವರ್ಷಗಳ ಪರಂಪರೆ. ಇದನ್ನು ಹುಟ್ಟು ಹಾಕಿದವರು ಮೇಲ್ವರ್ಗದ ಬ್ರಾಹ್ಮಣರಲ್ಲ. ಕೆಳವರ್ಗದ, ಕೆಳಜಾತಿಯ ಅನಕ್ಷರಸ್ಥರು. ಚಂದ್ರಗಿರಿ ಅಂಬು, ಕಾವುಗೋಳಿ ಕಣ್ಣನ್, ಕುಂಬ್ಳೆ ಸಣ್ಣ ತಿಮ್ಮಪ್ಪ, ಕುಟ್ಯಪ್ಪು, ಸುಬ್ಬ, ಬಣ್ಣದ ವೇಷ ಖ್ಯಾತಿಯ ಬಣ್ಣದ ಮಾಲಿಂಗ, ಪಡ್ರೆ ಚಂದು, ಸ್ತ್ರೀ ವೇಷಧಾರಿಗಳಾದ ದೇರಣ್ಣ, ಐತಪ್ಪು ಮೊದಲಾದವರು. ಇವರೆಲ್ಲಾ ತೆಂಕುತಿಟ್ಟಿನ ಯಕ್ಷಗಾನವನ್ನು ದೊಂದಿ ಬೆಳಕಿನಲ್ಲಿ ನಡೆಸಿದವರು. ಇವರಲ್ಲಿ ಶಾಲೆಯ ಮುಖ ಕಾಣದವರೇ ಹೆಚ್ಚು. ರಾಮಾಯಣ ಮಹಾಭಾರತದ ಕತೆಗಳನ್ನು ಕೇಳಿ ತಿಳಿದುಕೊಂಡು ಕನ್ನಡ ಮಾತನಾಡಲು ಇತರರಿಂದ ಕಲಿತುಕೊಂಡವರು. ತುಳು, ಮಲಯಾಳಂ ಮಾತೃ ಭಾಷೆಯ ನೇಕಾರರು, ಗಾಣಿಗರು, ಬೋವಿಗಳು, ಯಾದವರು ಮತ್ತಿತರ ಕೆಳ ಜಾತಿಯವರು. ಪರಿಶಿಷ್ಟ ಸಮಗಾರ ಜಾತಿಗೆ ಸೇರಿದ ವಾಸು ಮತ್ತು ಕೃಷ್ಣ ಅಪ್ರತಿಮ ಯಕ್ಷಗಾನ ಕಲಾವಿದರಾಗಿ ಮೆರೆದವರು. ಹಿಂದೂಗಳಷ್ಟೇ ಅಲ್ಲದೇ ಕ್ರೈಸ್ತ ಧರ್ಮಕ್ಕೆ ಸೇರಿದ ಕ್ರಿಶ್ಚನ್ ಬಾಬು ದಿಗಿಣ ಹೊಡಿಯುವುದರಲ್ಲಿ ಖ್ಯಾತಿ ಪಡೆದ ಪುಂಡು ವೇಷಧಾರಿಯಾಗಿದ್ದರೆಂಬುದು ಯಕ್ಷಗಾನಾಸಕ್ತರಿಗೆಲ್ಲಾ ಗೊತ್ತು.

ಬಡಗುತಿಟ್ಟಿನ ಯಕ್ಷಗಾನದಲ್ಲಿ ಮಾವಿನ ಕುರ್ವೆ ತಿಮ್ಮಪ್ಪ ನಾಯ್ಕ, ಗುಣವಂತೆ ಕನ್ನಯ್ಯ ಭಂಡಾರಿ, ಬಾಸುಗೋಡು ಮೋನಪ್ಪ ನಾಯ್ಕ, ಹಾರಾಡಿ ರಾಮ ಗಾಣಿಗ, ಕೃಷ್ಣ ಗಾಣಿಗ, ಮಟ್ಟಾಡಿ ವೀರಭದ್ರ ನಾಯ್ಕ, ಮಾರ್ಗೋಡಿ ಗೋವಿಂದ ಸೇರ್ವೆಗಾರ, ಕುಂಜಾಲು ರಾಮಕೃಷ್ಣ ನಾಯ್ಕ, ಕೊಕ್ಕಣೆ ನರಸಿಂಹ ಕಾಮತ್, ಕೋಟ ವೈಕುಂಠ, ಹೇರಂಜಾಲು ವೆಂಕಟ್ರಮಣ ಗಾಣಿಗ, ಹಾರಾಡಿ ನಾಯಾಣ ಗಾಣಿಗ, ಕರ್ಕಿ ಪ್ರಭಾಕರ ಭಂಡಾರಿ, ದುರ್ಗಪ್ಪ ಗುಡಿಗಾರ, ಐರೋಡಿ ಗೋವಿಂದಪ್ಪ ಮೊದಲಾದವರಿಂದ ಹೆಚ್ಚು ಬೆಳಕಿಗೆ ಬಂದು ಒಂದು ಜನಪ್ರಿಯ ಕಲೆಯಾಗಿ ಜನಸಾಮಾನ್ಯರ ಕಲೆಯಾಗಿ ಮೆರೆಯಿತು. ಕರ್ನಾಟಕ ಯಕ್ಷಗಾನ-ಬಯಲಾಟ ಅಕಾಡೆಮಿಯ ಪ್ರಥಮ ಅಧ್ಯಕ್ಷರಾದ ಖ್ಯಾತ ಯಕ್ಷಗಾನ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರರಾಯರು ತಮ್ಮ ಪ್ರತಿಯೊಂದು ಭಾಷಣದಲ್ಲಿಯೂ ಯಕ್ಷಗಾನದ ಈ ಮೂಲ ಪುರುಷರನ್ನು ನೆನಪಿಸಿಕೊಳ್ಳುತ್ತಿದ್ದರು. ಅವರು ಯಕ್ಷಗಾನ ಕಲಾವಿದರಿಗೆ ಪ್ರಾತಃಸ್ಮರಣೀಯರೆನ್ನುತ್ತಿದ್ದರು. ಕುಂಬ್ಳೆ ಸುಂದರರಾಯರೂ ಹಿಂದುಳಿದ ನೇಕಾರ ಕುಟುಂಬದಿಂದಲೇ ಬಂದವರು.

ಶ್ರೀ ಪಕಳಕು೦ಜ ಕೃಷ್ಣ ನಾಯ್ಕ‌
ಯಕ್ಷಗಾನ ಮೇಳಗಳಲ್ಲಿ ಜಾತಿಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಜೀವಿಸುತ್ತಾರೆ, ಪಂಕ್ತಿ ಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಕುಳಿದು ಊಟ ಮಾಡುತ್ತಾರೆ. ಇವರ ನಡುವೆ ತಮ್ಮ ವೈದಿಕ ಆಹ್ನಿಕಗಳನ್ನು ಕ್ರಮಬದ್ಧವಾಗಿ ಶುದ್ಧಾಚಾರದಿಂದ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬ ಕಾರಣದಿಂದ ಬ್ರಾಹ್ಮಣ ವರ್ಗದವರಾರೂ ಆರಂಭದ ಹಂತದಲ್ಲಿ ಯಕ್ಷಗಾನ ಮೇಳಗಳಿಗೆ ಸೇರುತ್ತಿರಲಿಲ್ಲ. ಒಂದು ವೇಳೆ ಯಾರಾದರೂ ಸೇರಿದ್ದಾರೆಂದು ತಿಳಿದರೆ ಅಂಥವರನ್ನು ದೂರವಿಡುತ್ತಿದ್ದರು. ಆ ಕುಟುಂಬದ ಯುವಕರಿಗೆ ಹೆಣ್ಣು ಕೊಡಲು ಹಿಂಜರಿಯುತ್ತಿದ್ದರು. ಹೀಗೆ ಬ್ರಾಹ್ಮಣೇತರರಿಂದಲೇ ಯಕ್ಷಗಾನ ಮೊಳಕೆಯೊಡೆದು ಸಸಿಯಾಗಿ ಬೆಳೆಯಿತು. ಎರಡನೆಯ ಹಂತದಲ್ಲಿ ಬಂಟ ಸಮಾಜದ ಶ್ರೀಮಂತರು ಯಕ್ಷಗಾನದಲ್ಲಿ ಆಸಕ್ತಿ ತೋರಿ ಮೇಳಗಳನ್ನು ಕಟ್ಟಲು ಪ್ರಾರಂಭಿಸಿದರು. ಅವರಲ್ಲಿ ಇರಾ ಸೋಮನಾಥೇಶ್ವರ ಯಕ್ಷಗಾನ ಮಂಡಲಿಯನ್ನು ಕಟ್ಟಿದ ಕೊರಗಶೆಟ್ಟಿ ಅವರ ಪುತ್ರ ವಿಠಲ ಶೆಟ್ಟಿ ಪ್ರಮುಖರು. ಪುತ್ತೂರು ಶೀನಪ್ಪ ಭಂಡಾರಿಯವರು ಪುತ್ತೂರು ಮೇಳ ಮತ್ತು ಸುಬ್ರಹ್ಮಣ್ಯ ಮೇಳ ಕಟ್ಟಿದ್ದರು.

ಶ್ರೀ ಪುತ್ತೂರು ಶೀನಪ್ಪ ಭ೦ಡಾರಿ
ಕಲಾವಿದರಾದ ಕಾಸರಗೋಡು ಸುಬ್ಬಯ್ಯ ಶೆಟ್ಟಿ, ಶೀನಪ್ಪ ಭಂಡಾರಿ, ಶ್ರೀಧರ ಭಂಡಾರಿ, ಅಳಿಕೆ ರಾಮಯ್ಯ ರೈ, ಬೋಳಾರ ನಾರಾಯಣ ಶೆಟ್ಟಿ, ಅಡ್ಕಸ್ಥಳ ನಾರಾಯಣ ಶೆಟ್ಟಿ, ಮಾಂಬಾಡಿ ನಾರಾಯಣ ರೈ ಮುಂತಾದವರು ಯಕ್ಷಗಾನಕ್ಕೆ ಸೇರಿ ಸುಧಾರಣೆಗಳನ್ನು ತಂದರು. ಯಕ್ಷಗಾನದಲ್ಲಿ ಬಳಸಲು ಉತ್ತಮ ಸಾಹಿತ್ಯ, ಕತೆಗಳ ಪ್ರಸಂಗಗಳ ಅವಶ್ಯಕತೆ ಇತ್ತು. ಅವುಗಳನ್ನು ರಚಿಸಿ ರಾಗಬದ್ಧವಾಗಿ ಹಾಡಲು ಸುಶಿಕ್ಷಿತ ಭಾಗವತರು ಬೇಕಿತ್ತು. ಮೇಳದ ವ್ಯವಸ್ಥಾಪಕರು ಇಂಥವರ ಹುಡುಕಾಟ ನಡೆಸಿದಾಗ ಸಿಕ್ಕವರು ಬ್ರಾಹ್ಮಣ ವರ್ಗದ ಭಾಗವತರು. ಇವರನ್ನು ಮೇಳಗಳೊಳಕ್ಕೆ ಆಹ್ವಾನಿಸಲಾಯಿತು. ದಾಮೋದರ ಮಂಡೆಚ್ಚ, ಅಗರಿ ಶ್ರೀನಿವಾಸ ಭಾಗವತ, ಕಡತೋಕ ಮಂಜುನಾಥ ಭಾಗವತ, ಬಲಿಪ ನಾರಾಯಣ ಭಾಗವತ ಮುಂತಾದವರು ಯಕ್ಷಗಾನ ಸೇರಿದರು. ಈ ಭಾಗವತರು ಮೇಳದ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಮುಂದಾದರು. ಕಲಾವಿದರಿಗೆ ಮಾರ್ಗದರ್ಶನ ನೀಡಿ ಅರ್ಥಗಾರಿಕೆಯನ್ನು ಸುಸಂಸ್ಕೃತ ಹಾಗೂ ಸಾಹಿತ್ಯಿಕವನ್ನಾಗಿ ಮಾರ್ಪಾಡುಗೊಳಿಸಿದರು. ಯಕ್ಷಗಾನ ಪ್ರೌಢಕಲೆಯಾಗಿ ಮೆರೆಯಿತು.

ಕಂದಾಚಾರ ಬಿಟ್ಟು ಮುಂದೆ ಬಂದು ಯಕ್ಷಗಾನ ರಂಗಕ್ಕೆ ಮೆರುಗು ಕೊಟ್ಟ ಬ್ರಾಹ್ಮಣ ಕುಟುಂಬದವರೆಂದರೆ ಮಲ್ಪೆ ಸಾಮಗ ಕುಟುಂಬದವರು ಮತ್ತು ಉತ್ತರ ಕನ್ನಡ ಹೆಗಡೆ ಪರಿವಾರದವರು. ಮಲ್ಪೆ ಶಂಕರನಾರಾಯಣ ಸಾಮಗ ಮತ್ತು ಅವರ ಕುಟುಂಬಸ್ಥರೆಲ್ಲರೂ ತೆಂಕುತಿಟ್ಟಿನ ಯಕ್ಷಗಾನವನ್ನು ಮೇಲ್ಮಟ್ಟಕ್ಕೆ ತಂದು ನಿಲ್ಲಿಸಿದರು. ಕೆರೆಮನೆ ಶಂಭು ಹೆಗಡೆ, ಶಿವರಾಮ ಹೆಗಡೆ, ಮುರೂರು ದೇವರು ಹೆಗಡೆ, ಮಹಾಬಲ ಹೆಗಡೆ, ಗಜಾನನ ಹೆಗಡೆ ಮುಂತಾದವರು ಯಕ್ಷಗಾನ ಕ್ಷೇತ್ರಕ್ಕಿಳಿದು ಕೀರ್ತಿ ಪಡೆದರಷ್ಟೇ ಅಲ್ಲದೆ ಯಕ್ಷಗಾನದ ಕೀರ್ತಿಯನ್ನು ನಾಲ್ದೆಸೆಗೆ ಪಸರಿಸುವಂತೆ ಮಾಡಿದರು.

ಶ್ರೀ ಪಾತಾಳ ವೆಂಕಟರಮಣ ಭಟ್
ಈ ಎರಡೂ ಮನೆತನದವರು ಯಕ್ಷಗಾನಕ್ಕೆ ಹೊಸ ಆಯಾಮ ತಂದು ಕೊಟ್ಟಾಗ ಶೇಣಿ ಗೋಪಾಲಕೃಷ್ಣ ಭಟ್, ಗೋವಿಂದ ಭಟ್, ವಿಟ್ಲ ಗೋಪಾಲ ಕೃಷ್ಣ ಜೋಶಿ, ಪಾತಾಳ ವೆಂಕಟರಮಣ ಭಟ್, ಕರ್ಗಲ್ಲು ಸುಬ್ಬಣ್ಣ ಭಟ್, ವಿಶ್ವೇಶ್ವರ ಜೋಶಿ, ವೆಂಕಟ್ರಮಣ ಯಾಜಿ, ದೀವಣ ಭೀಮಭಟ್, ಕೋಳ್ಯೂರು ರಾಮಚಂದ್ರರಾವ್ ಮುಂತಾದವರೆಲ್ಲರೂ ಸೇರಿ ಯಕ್ಷಗಾನವನ್ನು ಒಂದು ಪ್ರೌಢ ಕಲೆಯಾಗಿಸುವುದರಲ್ಲಿ ಬಹುಮುಖ್ಯ ಪಾತ್ರವಹಿಸಿದರು. ಆದರೆ ಇವರೆಲ್ಲರ ಅವಿರತ ಶ್ರಮದಿಂದ ಯಕ್ಷಗಾನ ತನ್ನ ಜಾನಪದೀಯತೆಯನ್ನು ಕಳೆದುಕೊಳ್ಳುತ್ತಾ ಶಿಷ್ಟದ ಬಂಧನದೆಡೆ ಸರಿಯಿತು ಎಂಬುದನ್ನಿಲ್ಲಿ ಗುರುತಿಸಲೇಬೇಕಾಗುತ್ತದೆ.

ಶಿವರಾಮ ಕಾರಂತರಂಥ ಹಿರಿಯ ಸಾಹಿತಿ ಈ ಕ್ಷೇತ್ರಕ್ಕೆ ಬಂದು ತಾವೇ ಕಾಲಿಗೆ ಗೆಜ್ಜೆಕಟ್ಟಿ ಒಂದು ಬಗೆಯಲ್ಲಿ ಸಮಾನತೆಯ ರೂಪಕವಾದರು. ಈಗ ಯಕ್ಷಗಾನ ದೇಶ ವಿದೇಶಗಳಲ್ಲೂ ಪ್ರಸಿದ್ಧ. ಈ ಕ್ಷೇತ್ರದಲ್ಲೆಗ ಸವರ್ಣೀಯರಷ್ಟೇ ಅಲ್ಲದೆ ಪರಿಶಿಷ್ಟ ಜಾತಿಗೆ ಸೇರಿದ ಉಪ್ಪಿನಂಗಡಿಯ ಡೀಕಯ್ಯ, ಉಪ್ಪಳದ ದಾ.ನಾ. ಉಮನ ಮುಂತಾದವರೂ ಕೂಡಾ ಯಕ್ಷಗಾನ ಮೇಳಗಳನ್ನು ಕಟ್ಟಿ ತಮ್ಮ ಬಳಗದವರೊಂದಿಗೆ ಪ್ರದರ್ಶನಗಳನ್ನು ನೀಡುತ್ತಾ ಈ ಕಲೆಗೆ ಜಾತಿ ಭೇದವಿಲ್ಲ ಎಂಬುದಕ್ಕೆ ದೃಷ್ಟಾಂತವಾಗಿದ್ದಾರೆ.



ಕೃಪೆ : http://prajavani.net


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ